ಶಕುಂತಲಾ ಆರ್ ಕಿಣಿ

ಶಕುಂತಲಾ ಆರ್ ಕಿಣಿ

1956ರಲ್ಲಿ ಕೇರಳರಾಜ್ಯದ ಬಳ್ಳಂಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ ಶಕುಂತಲಾ.ಆರ್.ಕಿಣಿಯ ಜನನ. ಪುರುಷೋತ್ತಮ ಪೈ ಹಾಗೂ ರಮಣಿ ಪೈಗಳ ಮಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ 8 ಚಿನ್ನದ ಪದಕಗಳೊಡನೆ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ. ಆರಂಭಿಕ 2 ವರುಷಗಳು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ. 1981 ರಿಂದ ೨2016 ಜನವರಿವರೆಗೆ 35 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ. ಆಕಾಶವಾಣಿಗಾಗಿ ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಹಲವಾರು ರೂಪಕ,ನಾಟಕ,ಕವಿತೆ,ಸಂದರ್ಶನಗಳ ರಚನೆ ಹಾಗೂ ನಿರ್ವಹಣೆ. ಥೊಡೇ ಏಕಾಂತ ( ಹೊಸಸಂಜೆ ಪ್ರಕಾಶನ) ಪ್ರಕಟಿತ ಕೊಂಕಣಿ ಕವನ ಸಂಕಲನ. ಖ್ಯಾತ ಕೊಂಕಣಿಕವಿ ಬಾಕಿಬಾಬ ಬೋರ್ಕರ್ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ "ನೂಪುರ" ಎಂಬ ಪುಸ್ತಕ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟ. ಬಾಲ್ಯಕಾಲದ ನೆನಪುಗಳನ್ನು ಸಂಕಲಿಸಿದ "ಬಳ್ಳಂಬೆಟ್ಟಿನ ಬಾಲ್ಯಕಾಲ’ಎಂಬ ಪುಸ್ತಕ ಇನ್ನೊಂದು ಪ್ರಕ್ರಟಿತ ಪುಸ್ತಕ. ವಿಶ್ವ ಕೊಂಕಣಿ ಸಮ್ಮೇಳನವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಸಮ್ಮೇಳನಗಳ ಸಭಾನಿರ್ವಹಣೆ, ಹಲವಾರು ಕವಿಗೋಷ್ಠಿ, ವಿಚಾರಸಂಕಿರಣಗಳಲ್ಲಿ ಭಾಗವಹಿಸುವಿಕೆ. "ಅಂಕುರ’ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನಾಟಕ ತರಬೇತಿ. "ಸ್ವಪ್ನ ಸಾರಸ್ವತ" ನಾಟಕವೂ ಸೇರಿದಂತೆ ಹಲವಾರು ನಾಟಕಗಳ ಕೊಂಕಣಿ ಅನುವಾದ.  ಕನಕದಾಸರ ಹಲವಾರು ಕೀರ್ತನೆಗಳ ಕೊಂಕಣಿ ಅನುವಾದ ಮಾದಿರುತ್ತಾರೆ.  ಬಾನುಲಿ ಪಯಣದ ಮೂರುವರೆ ದಶಕಗಳು, ನೆನಪಿನ ಮಾಲೆ ಅಂಕಣ ಬರಹ ಕಿಟಾಳ್ ಅಂತರ್ಜಾಲ ಸಮೂಹದ ಆರ್ಸೊ ಪಾಕ್ಷಿಕ ಪತ್ರಿಕೆಯಲ್ಲಿ ಮಾರ್ಚ್ 15 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯ ಕನ್ನಡ ಓದುಗರಿಗೆ ಮತ್ತು ಶ್ರೀಮತಿ ಶಕುಂತಲಾ ಆರ್. ಕಿಣಿ ಯವರ ಅಭಿಮಾನಿಗಳು, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲೆಂದು ಅಂಕಣದ ಕಂತುಗಳನ್ನು ಇಲ್ಲಿ ಪ್ರಕಟಿಸುತಿದ್ದೇವೆ. ಓದಿ, ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಈ ಬರಹ ಅಥವಾ ಬರಹದ ಭಾಗವನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳುವ ಮೊದಲು ಲೇಖಕಿ / ಪ್ರಕಾಶಕರ ಅನುಮತಿ ಪಡೆಯಲು ಮರೆಯದಿರಿ.

Recent Archives

ಪಾಳಿಯ ಜೋಳಿಗೆಯಲ್ಲಿ ಕಂದಯ್ಯನ ಕೇಕೆ

ಶಕುಂತಲಾ ಆರ್ ಕಿಣಿ        2016-08-14 17:36:21
  |     |   

ಆಕಾಶವಾಣಿಯ ಕೆಲಸಗಳು ಒಂದೊಂದೇ ಕರಗತವಾಗುತ್ತಾ ಹೋಗುತ್ತಿದ್ದಂತೆ ನಾನು ನಿರಾಳವಾಗುತ್ತಲಿದ್ದೆ. ಆದರೆ ನನ್ನ ಉದ್ಯೋಗಪರ್ವಕ್ಕೂ ಮುನ್ನವೇ ನನ್ನ ಜಾತಕ ಹಿಡಿದು ಅಲೆಯುತ್ತಿದ್ದ ಅಪ್ಪಯ್ಯನ ವರಬೇಟೆ ಇನ್ನಷ್ಟು ಹೆಚ್ಚಾಯಿತು. ಕೆಲವು ವರ ಮಹಾಶಯರು ಹುಡುಗಿ ಕಲಿತದ್ದು ನಮಗೆ ಜಾಸ್ತಿಯಾಯಿತು ಅನ್ನುವ ಆಕ್ಷೇಪ ಎತ್ತಿದರೆ ಬ್ಯಾಂಕ್ ಉದ್ಯೋಗದಷ್ಟು ವರ್ಗಾವಣೆಯ ಅವಕಾಶಗಳು ಆಕಾಶವಾಣಿಯ ಉದ್ಯೋಗದಲ್ಲಿ ಇಲ್ಲದ ಕಾರಣ ಬ್ಯಾಂಕ್ ಉದ್ಯೋಗಿ ವರ ಮಹಾಶಯರು ಮೂತಿ ತಿರುವಿದರು. ಕಲಿತು ಕೆಲಸದಲ್ಲಿರುವ ಹುಡುಗಿ ಅಡುಗೆ ಮಾಡಿಯಾಳೇ, ನಮ್ಮ ಮಾತು ಕೇಳಿಯಾಳೇ ಎಂಬ ರಾಗ ಎಳೆದವರು ವ್ಯಾಪಾರ ವ್ಯವಹಾರದ ಹುಡುಗನ ತಂದೆ ತಾಯಂದಿರು. ಇದಕ್ಕೆಲ್ಲಾ ಹೆದರಿಯೇ ನಾನು ಎಂ. ಎ. ಮುಗಿದ ಬಳಿಕ ತೀವ್ರವಾಗಿದ್ದ ನನ್ನ ಸಂಶೋಧನಾ ಆಸಕ್ತಿಗೆ ತಿಲಾಂಜಲಿ ಇತ್ತಿದ್ದು. ಇದು ಸುಮಾರು ಎಂಬತ್ತರ ದಶಕದ ಕಾಲ, ಈಗ ಪರಿಸ್ಥಿತಿ ತುಂಬಾ ಬದಲಾಗಿದೆ.

 

ಆದರೆ ನನ್ನ ಉದ್ಯೋಗ, ವಿದ್ಯೆ, ರೂಪ ಯಾವುದನ್ನೂ ಲೆಕ್ಕಿಸದೆ ಸೈ ಎಂದು ನನ್ನ ಕೈ ಹಿಡಿದವರು ಉಳ್ಳಾಲ ರಾಘವೇಂದ್ರ ಕಿಣಿಯವರು. ಉದ್ಯೋಗದ ಬೇಟೆ, ಹೊಸ ಉದ್ಯೋಗಕ್ಕೆ ಹೊಂದಿಕೊಳ್ಳುವ ಆತಂಕ, ಹಾಸ್ಟೆಲ್ ಊಟ ಇವೆಲ್ಲವುಗಳಿಂದ ಸರಿಯಾಗಿ ನಲ್ವತ್ತು ಕೆ.ಜಿ. ತೂಗದ ಒಣಕಟ್ಟಿಗೆಯಂತಿದ್ದ ನನ್ನನ್ನು ಅವರು ಅದು ಹೇಗೆ ಒಪ್ಪಿದರೋ ಕಾಣೆ. ರಾಜ್ಯ ಸರಕಾರದ ಸ್ವಾಮ್ಯದ ವಾಣಿಜ್ಯ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದ ಅವರದು ತಿಂಗಳಲ್ಲಿ ಹದಿನೈದು ದಿನ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಹಾಗೂ ಉಳಿದ ಹದಿನೈದು ದಿನ ದ. ಕ. ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಿಗೆ ಟೂರ್ ಹೋಗುವ ಕೆಲಸ. ನನ್ನ ಶಿಫ್ಟ್ ಹಾಗೂ ಅವರ ಟೂರ್ ಖೋ - ಖೋ ಆಟದಂತೆ. ನಾನು ಶಿಫ್ಟ್ ಮುಗಿಸಿ ಒಳಗೆ ಬರುವಾಗ ಅವರು ಟೂರ್ ಹೊರಡುವುದು, ಅವರು ಮನೆಯಲ್ಲಿದ್ದಾಗ ನಾನು ಶಿಫ್ಟ್ ನಿರ್ವಹಿಸುವುದು - ಈ ಹೊಂದಾಣಿಕೆಯ ಕಣ್ಣುಮುಚ್ಚಾಲೆ ಆಟದಲ್ಲಿ ನಮ್ಮ ದಾಂಪತ್ಯ ಚಿರನೂತನವಾಗಿಯೇ ಉಳಿಯಿತು, ನಮಗೆ ಜಗಳವಾಡಬೇಕೆಂದರೂ ಸಮಯದ ಅಭಾವವಿತ್ತು. ತಮ್ಮ ಎಳೆಯ ವಯಸ್ಸಿನಲ್ಲಿಯೇ ತಂದೆತಾಯಂದಿರನ್ನು ಅವರು ಕಳೆದುಕೊಂಡಿದ್ದ ಕಾರಣ ಮನೆಯಲ್ಲಿ ನಾವಿಬ್ಬರೇ, ಅವರು ಟೂರ್ ಹೋದ ಸಮಯದಲ್ಲಿ ನನ್ನ ಜೊತೆಗಿರಲೆಂದು ಅಪ್ಪಯ್ಯ ಊರಿನಿಂದ ಬರುವುದು ಅನಿವಾರ್ಯವಾಯಿತು. ಅವರಿಗೆ ಬಂದಿರಲು ಸಾಧ್ಯವಾಗದ ದಿನಗಳಲ್ಲಿ ಹಾಸ್ಟೆಲ್ ಸ್ನೇಹಿತೆ ಗಿರಿಜಾ ಬಂದು ಉಳಿದದ್ದೂ ಇದೆ.

 

 

ಮನೆಗೆ ಬೇಕಾದ ಸಣ್ಣ ಪುಟ್ಟ ಸಾಮಾನು ಸರಂಜಾಮುಗಳನ್ನು ಹೊಂದಿಸಿಕೊಳ್ಳುತ್ತಾ ನಮ್ಮ ಪುಟ್ಟಸಂಸಾರ ಆರಂಭವಾಯಿತು. ನನ್ನ ಅಡಿಗೆಯ ಮೊದಲ ಪ್ರಯೋಗಗಳನ್ನು ಕಿಣಿಯವರ ಮೇಲೆ ನಾನು ಯಶಸ್ವಿಯಾಗಿ ನಡೆಸಲಾರಂಭಿಸಿದೆ. ಅವರು ದಿನದಿಂದ ದಿನಕ್ಕೆ ತೂಕ ಗಳಿಸಿಕೊಳ್ಳುತ್ತಾ ಹೋದುದನ್ನು ನೋಡಿದರೆ ನನ್ನ ಪ್ರಯೋಗಗಳು ಫಲಪ್ರದವಾಗಿದ್ದುವು ಅಂತ ಭಾವಿಸಬಹುದು. ಹೊತ್ತುಗೊತ್ತಿಲ್ಲದ ನನ್ನ ಪಾಳಿಗಳಿಗೆ ಅವರೂ ಅನಿವಾರ್ಯವಾಗಿ ಒಗ್ಗಿಕೊಂಡರು, ನಾನೂ ಅವರ ದೀರ್ಘ ಟೂರ್ ಗಳನ್ನು ಒಪ್ಪಿಕೊಂಡೆ. ಕೊನೆಯ ಮಗಳಾದ ನನ್ನ ಚೊಚ್ಚಲ ಬಾಣಂತನವನ್ನು ತನ್ನ ಕೈಕಾಲು ಗಟ್ಟಿ ಇರುವಾಗಲೇ ಆದಷ್ಟು ಬೇಗ ಮುಗಿಸಿ ನಿರಾಳವಾಗಬೇಕೆನ್ನುವ ಅಮ್ಮನ ಒತ್ತಾಸೆಗೆ ಮಣಿದು, ದಿನನಿತ್ಯ ಆಕಾಶವಾಣಿಯಲ್ಲಿ ಕುಟುಂಬಯೋಜನೆಯ ಸ್ಲೋಗನ್ ಗಳನ್ನು ನಾನೇ ಉದ್ಘೋಷಿಸುತ್ತಿದ್ದರೂ ನಾನು ಅದ್ಯಾವುದನ್ನೂ ಅನುಷ್ಠಾನಕ್ಕೆ ತರದೆ ಬಹುಬೇಗ ತಾಯಾಗುವ ನಿರ್ಧಾರಕ್ಕೆ ಬಂದೆ.

 

ಮಗ ಹೊಟ್ಟೆಯಲ್ಲಿ ಅಂಕುರಿಸಿದ ಆ ದಿನಗಳಲ್ಲಿ ಉಂಟಾದ ಮುಂಜಾವಿನ ಅಸ್ವಸ್ಥತೆ, ತಡೆಯಲಾಗದ ಹಸಿವು ಹಾಗೂ ತತ್ಸಂಬಂಧೀ ಇನ್ನಿತರ ಬಾಧೆಗಳ ವೇಳೆಯಲ್ಲಿ ನನ್ನ ಕೆಲವು ಸಹೋದ್ಯೋಗಿ ಸ್ನೇಹಿತೆಯರು ಸಾಕಷ್ಟು ನೆರವಾಗಿದ್ದಾರೆ. ಸುಧಾರಾವ್ ತಾನು ತಂದ ಊಟದ ಡಬ್ಬಿಯನ್ನು ತೆರೆದು ನನಗೆ ಉಣ್ಣಲು ಕೊಟ್ಟಿದ್ದಾರೆ. ನಮ್ಮ ನೆರೆಮನೆಯವರಾಗಿದ್ದ ಸ್ಟೇಷನ್ ಇಂಜಿನಿಯರ್ ಪಾವನಮೂರ್ತಿಯವರ ಹೆಂಡತಿ ನಾನು ಬೆಳಗ್ಗಿನ ಪಾಳಿ ಮುಗಿಸಿ ಬರುವಾಗ ಬಿಸಿ ಬಿಸಿ ಅನ್ನ, ಸಾರು, ಪುಳಿಯೋಗರೆ, ಬಾಯಿ ಚಪ್ಪರಿಸುವ ಟೊಮೇಟೊ ಗೊಜ್ಜು, ಚಟ್ನಿ ಇತ್ಯಾದಿ ಕೊಟ್ಟು ಉಪಚರಿಸಿದ್ದಾರೆ. ಜಯಶ್ರೀ ಅವರೂ ತನ್ನ ಮನೆಯಿಂದ ಕೆಲವು ವಿಶೇಷ ತಿನಿಸುಗಳನ್ನು ಮಾಡಿ ತಂದುಕೊಟ್ಟಿದ್ದಾರೆ. ತಾನು ಡ್ಯೂಟಿರೂಮಿಗೆ ಬಂದಾಗಲೆಲ್ಲಾ ಎದ್ದುನಿಲ್ಲುವ ನನ್ನನ್ನು ಕಂಡು "ಆ ಹುಡುಗಿಗೆ ಹಾಗೆಲ್ಲಾ ಎದ್ದು ನಿಲ್ಲಬಾರದೆಂದು ಹೇಳಿ" ಎಂಬುದಾಗಿ ಸಹಾಯಕ ನಿಲಯ ನಿರ್ದೇಶಕರಾಗಿದ್ದ ವಿ. ಬಸವರಾಜ್ ಅವರು ಜಯಶ್ರೀ ಅವರ ಬಳಿ ಹೇಳಿ ಕಳಿಸುತ್ತಿದ್ದ ನೆನಪು. ಬಸವರಾಜ್ ಅವರಿಗೆ ಸರಿಯಾದ ಜೋಡಿ ಅವರ ಹೆಂಡತಿ ವಿಜಯಲಕ್ಷ್ಮಿಯವರು ತಮ್ಮ ಮನೆಯಲ್ಲಿ ಹಬ್ಬದಡುಗೆ ಮಾಡಿದಾಗ, ಬಿಸಿಬೇಳೆ ಬಾತ್ ಮಾಡಿದಾಗ ನಮ್ಮನ್ನು ಊಟಕ್ಕೆ ಕರೆಯುತ್ತಿದ್ದರು. ನಾವು ಹೊಸದಾಗಿ ಮನೆ ಹೂಡಿದ ದಿನ ನಾನು ಸಾಮಾನುಗಳನ್ನು ಅಧಂಬರ್ಧ ಜೋಡಿಸಿ ಸಂಜೆಯ ಪಾಳಿಗೆ ಓಡಿದ್ದೆ. ರಾತ್ರಿ ಶಿಫ್ಟ್ ಮುಗಿಸಿ ಬರುವ ವರೆಗೂ ಕಾದು ಊಟ ಬಡಿಸಿ ಉಪಚರಿಸಿದವರು ನಮ್ಮ ನೆರೆಯವರೂ ಆಕಾಶವಾಣಿಯಲ್ಲಿ ನನ್ನ ಅಧಿಕಾರಿಗಳೂ ಆಗಿದ್ದ ಎನ್. ಜಿ. ಶ್ರೀನಿವಾಸ್ ದಂಪತಿಗಳು. ಇಂಥ ಒಂದು ಸ್ನೇಹಮಯ ವಾತಾವರಣ ಆಗ ಇತ್ತು. ಆದರೆ ಈಗ ಅದು ನಿಧಾನವಾಗಿ ಮರೆಯಾಗುತ್ತಿದೆ. ಬಹುತೇಕ ಕಣ್ಮರೆಯಾಗಿದೆ ಎಂದೇ ಹೇಳಬೇಕು. ನನ್ನ ಕಾಲದಲ್ಲಿ ಎಲ್ಲವೂ ಸರಿಯಾಗಿತ್ತು ಅಂತಲ್ಲ. ಹೊಸ ಯುಗಾದಿಗೆ, ಹೊಸ ದೀಪಾವಳಿಗೆ ಕೂಡಾ ರಜೆ ಸಿಗದೆ ಅಪ್ಪ, ಅಮ್ಮ ಹೊಸ ಮದುಮಕ್ಕಳಿಗಾಗಿ ಕಾದು ಕುಳಿತು ನಿರಾಶರಾದ ಕಥೆ ಬೇರೆಯೇ ಇದೆ. ಆಗ ಈಗಿನಷ್ಟು ಕ್ಯಾಶುವಲ್ ಉದ್ಘೋಷಕರೂ ಇರಲಿಲ್ಲ. ಊರಿಗೆ ಮೊದಲೇ ಇಂಥ ಸಂದರ್ಭಗಳಿಗಾಗಿ ರಜೆಗಾಗಿ ಮನವಿ ಸಲ್ಲಿಸಬೇಕಿತ್ತೆಂಬ ಚಾಕಚಕ್ಯತೆ ಆಗಿನ್ನೂ ನನ್ನಲ್ಲಿ ಮೈಗೂಡಿರಲಿಲ್ಲ.

 

ನಾನು ಕೆಲಸಕ್ಕೆ ಸೇರಿ ವರ್ಷವಾಗುವುದರೊಳಗೆ ಮದುವೆಯಾದ ಕಾರಣ ನನ್ನ ಅಲ್ಪ ರಜೆಯೂ ಮದುವೆ, ಬಸಿರಿನ ಬೆಳಗ್ಗಿನ ಅಸ್ವಸ್ಥತೆಗೆಂದು ಖರ್ಚಾಗಿತ್ತು. ಆದುದರಿಂದ ನಾನು ನನಗೆ ಹೆರಿಗೆಗೆಂದು ಸಿಗಲಿದ್ದ ಕೇವಲ ತೊಂಬತ್ತು ದಿನಗಳ ಹೆರಿಗೆ ರಜೆಯನ್ನು ಹೆರುವ ಮೊದಲೇ ಪಡೆದು ವ್ಯಯ ಮಾಡದೆ ಬರಲಿರುವ ಪುಟ್ಟಮಗುವಿನ ಆರೈಕೆಗಾಗಿ ಉಳಿಸಬೇಕಿದ್ದುದರಿಂದ, ಹೆರುವ ವರೆಗೂ ಡ್ಯೂಟಿ ಮಾಡುವುದು ಎಂದು ತೀರ್ಮಾನಿಸಿದ್ದೆ (ಈಗ ಹೊಸವೇತನ ಆಯೋಗಗಳ ಶಿಫಾರಸಿನಂತೆ ಮಗು ಹುಟ್ಟಿ ಮೊದಲ ಹುಟ್ಟು ಹಬ್ಬ ಆಚರಿಸುವವರೆಗೂ ಹೆರಿಗೆ ರಜೆ ಮುಗಿಯುವುದೇ ಇಲ್ಲ) ಎಂಬತ್ತೆರಡರ ಏಷ್ಯನ್ ಕ್ರೀಡಾಕೂಟದ ನೇರ ಪ್ರಸಾರದ ವೀಕ್ಷಕ ವಿವರಣೆಯನ್ನು ಡಬಲ್ ಡ್ಯೂಟಿಗಳ ನಿಮಿತ್ತ ಅಮ್ಮನ ಹೊಟ್ಟೆಯಲ್ಲಿದ್ದುಕೊಂಡೇ ಎಡಬಿಡದೆ ಕೇಳಿಸಿಕೊಂಡಿದ್ದ ನನ್ನ ಮಗನನ್ನು ಆ ಕ್ರೀಡೆಯ ಲಾಂಛನವಾದ ಅಪ್ಪು ಎಂಬ ಹೆಸರಿನಿಂದಲೇ ರೇಡಿಯೋ ಅಭಿಮಾನಿ ಪಿ. ಆರ್. ನಾಯಕರು ಹುಟ್ಟುವ ಮೊದಲೇ ಹೆಸರಿಟ್ಟು ಕರೆಯುತ್ತಿದ್ದರು.

 

ಅಂದು ಡಿಸೆಂಬರ್ ಹನ್ನೊಂದು ಶನಿವಾರ. ಅದು ಎರಡನೆಯ ಶನಿವಾರವಾದುದರಿಂದ ಆಫೀಸಿಗೆ ರಜೆ. ಅಂದು ಕೆಲಸ ಮಾಡಿದರೆ ಒಂದು ಕಂಪಸೇಟರಿ ಆಫ್ ಸಿಗುತ್ತದೆ, ಮರುದಿನ ಆ ರಜೆಯನ್ನು ಅನುಭವಿಸಿ ಹದಿಮೂರನೇ ತಾರೀಕಿನಿಂದ ಹೆರಿಗೆ ರಜೆಯಲ್ಲಿ ಹೋಗುವುದು ಎಂದು ತೀರ್ಮಾನಿಸಿದ್ದೆ. ಡಿಸೆಂಬರ್ ಹನ್ನೊಂದರಂದು ಪಾಳಿಯಲ್ಲಿರುವ ಕೆಲವರನ್ನು ಬಿಟ್ಟರೆ ಆಕಾಶವಾಣಿಯಲ್ಲಿ ಬೇರೆ ಯಾರೂ ಇರಲಿಲ್ಲ. ದಿನ ತುಂಬುತ್ತಿರುವ ನಾನು ಡ್ಯೂಟಿಯಲ್ಲಿರುವೆನೆಂದು ಸಹಾಯಕ ನಿಲಯ ನಿರ್ದೇಶಕರಾದ ಬಸವರಾಜ್ ಅವರು ಏನೋ ಕೆಲಸ ಹಚ್ಚಿಕೊಂಡು ಸಂಜೆಯವರೆಗೂ ಆಕಾಶವಾಣಿಯಲ್ಲೇ ಇದ್ದರೆಂದು ನನಗೆ ಡ್ಯೂಟಿ ಮುಗಿಸಿ ಹೊರಡುವ ಮುನ್ನ ಅವರು "ಅಮ್ಮಾ,ಇನ್ನು ಹೊರಡ್ತೀರಾ, ಜೋಪಾನ." ಎಂದು ಕೇಳುವಾಗಲೇ ತಿಳಿದದ್ದು. ಇಂಥ ಕ್ಷಣಗಳಿಗೆ ಏನೆಂದು ಹೆಸರಿಡಬೇಕೆಂದು ನನಗೆ ತಿಳಿಯುತ್ತಿಲ್ಲ.

 

ನನ್ನ ಮಗ ಎಂಥ ಹೊಂದಾಣಿಕೆಯವ ಅಂದರೆ ಡಾಕ್ಟರ್ ಡಿಸೆಂಬರ್ ಹದಿನೆಂಟಕ್ಕೆ ದಿನವೆಂದು ಘೋಷಿಸಿದ್ದರೂ ನನ್ನ ಕಂಪನ್ಸೇಟರಿ ರಜೆಯಾದ ಡಿಸೆಂಬರ್ ಹನ್ನೆರಡರಂದೇ ಹುಟ್ಟಿ ತನ್ನ ಆರೈಕೆಗೆ ಪೂರ್ತಿ ತೊಂಬತ್ತು ದಿನಗಳನ್ನು ಅಮ್ಮನಿಗೆ ಒದಗಿಸಿ ಕೊಟ್ಟಿದ್ದ. ಬೆಳಗ್ಗೆ ನಾಲ್ಕೂವರೆಗೆ ಆರಂಭವಾದ ನೋವಿನ ದೀರ್ಘ ಪ್ರಕ್ರಿಯೆಗಳ ಅನಂತರ ಸಂಜೆ ನಾಲ್ಕೂವರೆಗೆ ಮಗ ಹುಟ್ಟಿ ನನ್ನ ಮಡಿಲಿಗೆ ಬಂದಿದ್ದ. ಹೊಟ್ಟೆಯಲ್ಲಿ ಇದ್ದಾಗ ಅರಿವಿಗೆ ಬಾರದ ಎಷ್ಟೋ ಸಂಗತಿಗಳು ಈ ಎಳೆಯ ಕೂಸನ್ನು ನೋಡಿದ ತಕ್ಷಣ ಮನಸ್ಸಿಗೆ ಬಂದು ನಾನು ಇಂಥ ಎಳೆಯ ಕಂದಮ್ಮನನ್ನು ಬಿಟ್ಟು ಡ್ಯೂಟಿಗೆ ಹೋಗೋದುಂಟೇ, ಅದು ಸರಿಯೇ ? ಈ ಪ್ರಶ್ನೆಗಳಿಂದ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳಲು ತೊಡಗಿದೆ. ಪ್ರತಿಕ್ಷಣವೂ ಅಮ್ಮನ ಕಣ್ಗಾವಲಿನ ಆರೈಕೆಯನ್ನು ಪಡೆಯಬೇಕಿದ್ದ ಆ ಪುಟ್ಟ ಮಗುವಿನ ಅಸಹಾಯಕತೆಯನ್ನು ಕಂಡು ನೀರಾಗಿ ಹೋಗಿದ್ದೆ. ಕೇವಲ ತೊಂಬತ್ತು ದಿನಗಳ ಪುಟ್ಟ ಕೈಗೂಸನ್ನು ಯಾರಿಗೋ ಒಪ್ಪಿಸಿ ಡ್ಯೂಟಿಗೆ ಮರಳಬೇಕಾದ ನನ್ನ ಅನಿವಾರ್ಯತೆಯನ್ನು ನೆನೆದೇ ಹೈರಾಣಾಗಿ ಹೋಗುತ್ತಿದ್ದೆ. ನನ್ನ ಅಮ್ಮನಿಗೋ ತನ್ನ ಮನೆ ಬಿಟ್ಟು ಇರಲಾರದ ಪರಿಸ್ಥಿತಿ. ಯಾರಾದರೂ ನಂಬಿಗಸ್ತರು ಮಗುವನ್ನು ನೋಡಿಕೊಳ್ಳಲು ಸಿಗಬಹುದೇ ಎಂದು ಅವರಿವರಲ್ಲಿ ವಿಚಾರಿಸುವುದೇ ಕೆಲಸವಾಯಿತು. ಉದ್ಯೋಗಿ ಅಮ್ಮಂದಿರ ಮಕ್ಕಳನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಉಸ್ತುವಾರಿ ಅಮ್ಮಂದಿರ ಬಗ್ಗೆ ಇಲ್ಲಸಲ್ಲದ ಕಥೆಗಳನ್ನು ಹೇಳಿ ಹೆದರಿಸುವವರಿಗೂ ಕಮ್ಮಿ ಇರಲಿಲ್ಲ.

 

ನೋಡ ನೋಡುತ್ತಾ ತೊಂಬತ್ತು ದಿನಗಳು ಕಳೆದೇ ಹೋದವು. ಅಷ್ಟರ ಒಳಗೆ ನಾನು ಮಗುವಿಗೆ ಬಾಟಲಿಹಾಲನ್ನು ಚೀಪುವುದನ್ನು ಅಭ್ಯಾಸಮಾಡಿಸಬೇಕಿತ್ತು. ಅವನೋ ಬಾಟಲಿಯನ್ನು ಬಾಯೊಳಗೆ ಇಟ್ಟರೆ ಮುಖ ಕಿವುಚಿ ಅಳುತ್ತಿದ್ದ. ಅಂತೂ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುವ ದಿನ ಬಂದೇ ಬಂತು. ಮದುವೆ ಮಾಡಿಕೊಟ್ಟರೂ ಇವಳದೊಂದು ಕಿರಿಕಿರಿ ಮುಗಿಯಲಿಲ್ಲ ಅನ್ನುವ ಆಕ್ಷೇಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅಮ್ಮ ಊರಿಗೆ ಹೊರಟೇ ಬಿಟ್ಟರು. ಆದರೆ ಊರಿನಿಂದ ಚಿಕ್ಕಪ್ಪನ ಮಗಳು ವೃಂದಾಳನ್ನು ಒಂದುವಾರದ ಮಟ್ಟಿಗೆ ಕಳುಹಿಸಿಕೊಟ್ಟರು. ವೃಂದಾ ಹಾಗೂ ಹೀಗೂ ಒಂದು ವಾರ ನಿಭಾಯಿಸಿದಳು, ಆ ಸಮಯದಲ್ಲಿ ನನ್ನ ಮಗನಿಗೆ ನನ್ನ ಪಾಳಿಗೆ ಅನುಗುಣವಾಗಿ ಸ್ನಾನ, ಬಟ್ಟೆ ಬದಲಿಸುವುದು ಇತ್ಯಾದಿ ಮಾಡತೊಡಗಿದೆ.

 

  

 

ಒಂದು ವಾರ ಕಳೆಯುತ್ತಲೇ ವೃಂದಾ ಊರಿಗೆ ಹೊರಟು ನಿಂತಳು. ಆಗ ಪಯ್ಯನೂರಿನಿಂದ ನನ್ನ ಶಶಿಕಲಕ್ಕ " ಮಲೆಯಾಳೀ ಮನೆಮಾತಿನ ಒಬ್ಬಾಕೆಯನ್ನು ಕಳುಹಿಸಿಕೊಡುತ್ತಿರುವೆ, ಆಕೆ ವಯನಾಡಿನ ಕುಡುಬಿ ಸಮುದಾಯಕ್ಕೆ ಸೇರಿದವಳು, ನೇರಳೆ ಬಣ್ಣದ ರವಕೆ, ಹಸುರು ಬಣ್ಣದ ಸೀರೆ ಉಟ್ಟಿದ್ದಾಳೆ, ಸಂಜೆ ನಾಲ್ಕೂವರೆಯ ಟ್ರೈನಿಗೆ ಬರುತ್ತಾಳೆ, ಅವಳಿಗೆ ಮಲೆಯಾಳ ಬಿಟ್ಟು ಬೇರೆ ಭಾಷೆ ಬರುವುದಿಲ್ಲ, ಆದುದರಿಂದ ಸ್ವಲ್ಪ ಮುಂಚಿತವಾಗಿಯೇ ರೈಲ್ವೇ ಸ್ಟೇಷನ್ ಗೆ ಹೋಗಿ ಕಾದಿರು" ಎಂದು ತಿಳಿಸಿದ ಕಾರಣ ಮೊದಲೇ ಹೋಗಿ ಕಾದೆ. ಗಾಡಿ ಬಂತು. ಒಂದೊಂದೂ ಕಂಪಾರ್ಟ್ಮೆಂಟ್ ನ ಬಳಿಗೂ ಓಡಾಡಿ ನೇರಳೆ, ಹಸುರು ಬಣ್ಣಗಳಿಗಾಗಿ ಹುಡುಕಾಡಿದೆ. ಎಲ್ಲರೂ ಇಳಿದು ಹೋಗುತ್ತಿದ್ದಾರೆ. ಅಯ್ಯೋ, ಎಲ್ಲಿ ನೇರಳೆ, ಹಸಿರು ಅಂತ ಗಾಬರಿಯಿಂದ ನೋಡುತ್ತಿರುವಂತೆಯೇ ರೈಲ್ವೇ ಗೇಟಿನ ಬಳಿ ಪ್ಲಾಸ್ಟಿಕ್ ತೊಟ್ಟೆಯೊಂದನ್ನು ಹಿಡಿದು ಆ ಕಡೆ ಈ ಕಡೆ ಭಯಭೀತ ಕಣ್ಣುಗಳಿಂದ ನೋಡುತ್ತಿರುವಾಕೆಯ ಬಳಿಗೆ ಓಡಿ "ಪ್ರೇಮ?" ಅಂತ ಕೇಳಿದೆ. ಅವಳು ಹೌದೆಂದು ತಲೆ ಆಡಿಸಿದಳು. ಹೋದ ಜೀವ ಬಂದಂತಾಯಿತು.

 

ಮುಂದೆ ಒಂದು ವಾರದ ಒಳಗೆ ಅಗತ್ಯಕ್ಕೆ ತಕ್ಕಷ್ಟು ಮಲೆಯಾಳಂ ಕಲಿತುಕೊಂಡೆ. ಮಗನನ್ನು ಅವಳ ಉಸ್ತುವಾರಿಗೆ ಒಪ್ಪಿಸಿದೆ. ಪ್ರೇಮ ಹೆಸರಿಗೆ ತಕ್ಕಂತೆ ಪ್ರೇಮಮಯಿ ತಾಯಿಯಂತೆ ಅವಳು ನಮ್ಮಲ್ಲಿದ್ದಷ್ಟು ಕಾಲ ನನ್ನ ಮಗನ ಹೊಟ್ಟೆ, ನೆತ್ತಿ ತಂಪಾಗಿರುವಂತೆ ನೋಡಿಕೊಂಡಳು. ಅವಳನ್ನು ನಾನೂ ಸಹೋದರಿಯಂತೆ ನೋಡಿಕೊಂಡೆ. ಆದರೂ ಅವನ ಕಾಯಿಲೆ, ಕಸಾಲೆಗಳ ಸಂದರ್ಭದಲ್ಲಾಗಲೀ, ಪ್ರೇಮ ಊರಿಗೆ ಹೋಗಿಬರುತ್ತಿದ್ದಾಗ ಆಕೆ ಪಡೆಯುತ್ತಿದ್ದ ತಿಂಗಳಪೂರ್ತಿ ರಜೆಯ ಸಮಯದಲ್ಲಾಗಲೀ, ನನ್ನ ಸಂಜೆ ಪಾಳಿಯ ದೀರ್ಘ ನೀರಸ ಅವಧಿಯಲ್ಲಾಗಲೀ, ಮುಂಜಾವ ಕಣ್ಣು ತೆರೆದು ಅಮ್ಮನಿಗಾಗಿ ಮಗು ಹುಡುಕುವ ಕ್ಷಣಗಳಲ್ಲಾಗಲೀ, ನನ್ನ ಹೊತ್ತುಗೊತ್ತಿಲ್ಲದ ಪಾಳಿಯಲ್ಲಾಗಲೀ - ಕ್ಷಣ ಕ್ಷಣವೂ ಆತನಿಗಾಗಿ ಮಿಡಿಯುತ್ತ, ಹಂಬಲಿಸುತ್ತ, ನೆನೆಯುತ್ತ, ತಮ್ಮ ಮಕ್ಕಳನ್ನು ಮುಚ್ಚಟೆಯಾಗಿ ಬೆಳೆಸುತ್ತಿರುವ ನನ್ನ ಅಕ್ಕಂದಿರನ್ನು ನೋಡಿ ಅಪರಾಧ ಪ್ರಜ್ಞೆಯಿಂದ ನರಳುತ್ತ ನಾನು ಕಳೆದ ಆ ದಿನಗಳು, ನನ್ನ ಕರುಳಕುಡಿಗೆ ಕೊಡಬೇಕಾದ ಅತ್ಯಂತ ಗುಣಾತ್ಮಕ ಸಮಯಕ್ಕಾಗಿ ನಾನು ನಡೆಸಿದ ಹೋರಾಟ, ಸಂಗ್ರಹಿಸಿದ ಆಟಿಕೆ, ಸಚಿತ್ರ ಕಥಾಪುಸ್ತಕಗಳು, ರಾತ್ರಿ ದಿನವೂ ಹೇಳಲು ತಯಾರು ಮಾಡಿಕೊಂಡ ದಿನಕ್ಕೊಂದು ಕಥೆಗಳು - ಇವೆಲ್ಲವನ್ನೂ ನಾನು ಬರೆಯಹೊರಟರೆ ಒಂದು ಪುಸ್ತಕವನ್ನೇ ಬರೆದೇನು.

 

 

ಅಮ್ಮನ ಸಾಮೀಪ್ಯಕ್ಕಾಗಿ ಅವನು ಹಂಬಲಿಸಿದ ಉತ್ಕಟಕ್ಷಣಗಳಲ್ಲಿ ಅದನ್ನು ಪೂರೈಸಲಾಗದ, ಕೊಂಚ ದೊಡ್ಡವನಾದ ಮೇಲೆ ತನಗೊಬ್ಬ ತಮ್ಮನೋ ತಂಗಿಯೋ ಬೇಕೆಂಬ ಆಸೆಯನ್ನು ಅವನು ವ್ಯಕ್ತಪಡಿಸಿದಾಗ ಅದನ್ನು ನೆರವೇರಿಸಲಾಗದ ನನ್ನ ಅಸಹಾಯಕತೆಗೆ ಈಗಲೂ ಮರುಗುತ್ತೇನೆ, ನನ್ನನ್ನೇ ಕ್ಷಮಿಸಲಾರದವಳಾಗುತ್ತೇನೆ. ಅತ್ಯಂತ ಹೊಂದಿಕೊಳ್ಳಬಲ್ಲ ಮಗುವಾಗಿ ನನಗೆ ಅವನು ನೀಡಿದ ತಾಯ್ತನದ ಸುಖದ ಕ್ಷಣಗಳನ್ನು ಎಂದೂ ಮರೆಯೆ. ನನ್ನ ಪಾಳಿಯ ಜೋಳಿಗೆಯಲ್ಲಿ ನಗುವಿನ ಕೇಕೆಯನ್ನು ತುಂಬಿ ಹೊಸ ಬದುಕಿನ ದರ್ಶನ ಮಾಡಿಸಿದ, ಮಾತೃತ್ವದ ಅನುಭೂತಿಯನ್ನು ನೀಡಿದ, ಬೆಳೆಬೆಳೆಯುತ್ತಾ ಗೆಳೆಯನಂತಾದ, ನನ್ನ ಪ್ರತಿಯೊಂದು ಸಮಸ್ಯೆ, ಪ್ರಶ್ನೆಗಳಿಗೆ ಉತ್ತರ ಹೇಳಬಲ್ಲ ಗುರುವಾಗಿ ನಿಂತಿರುವ ನನ್ನ ಮಗ ರಾಹುಲ ಇದೀಗ ನನ್ನ ಕೈಗಿತ್ತಿರುವ ತನ್ನ ಪ್ರತಿರೂಪದಂತಿರುವ ಮುದ್ದುಗೊಂಬೆ ರಿಷಿಕಾ ನಾನು ಕಳೆದುಕೊಂಡ ಕ್ಷಣಗಳನ್ನು ನನಗೆ ಮತ್ತೆ ನೀಡುತ್ತಾ ಹಳೆಯ ನೋವುಗಳಿಗೆ ಮುಲಾಮನ್ನು ಹಚ್ಚುತ್ತಿದ್ದಾಳೆ.

ಮುಂದಿನ ವಾರಕ್ಕೆ ►