ಶಕುಂತಲಾ ಆರ್ ಕಿಣಿ

ಶಕುಂತಲಾ ಆರ್ ಕಿಣಿ

1956ರಲ್ಲಿ ಕೇರಳರಾಜ್ಯದ ಬಳ್ಳಂಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ ಶಕುಂತಲಾ.ಆರ್.ಕಿಣಿಯ ಜನನ. ಪುರುಷೋತ್ತಮ ಪೈ ಹಾಗೂ ರಮಣಿ ಪೈಗಳ ಮಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ 8 ಚಿನ್ನದ ಪದಕಗಳೊಡನೆ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ. ಆರಂಭಿಕ 2 ವರುಷಗಳು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ. 1981 ರಿಂದ ೨2016 ಜನವರಿವರೆಗೆ 35 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ. ಆಕಾಶವಾಣಿಗಾಗಿ ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಹಲವಾರು ರೂಪಕ,ನಾಟಕ,ಕವಿತೆ,ಸಂದರ್ಶನಗಳ ರಚನೆ ಹಾಗೂ ನಿರ್ವಹಣೆ. ಥೊಡೇ ಏಕಾಂತ ( ಹೊಸಸಂಜೆ ಪ್ರಕಾಶನ) ಪ್ರಕಟಿತ ಕೊಂಕಣಿ ಕವನ ಸಂಕಲನ. ಖ್ಯಾತ ಕೊಂಕಣಿಕವಿ ಬಾಕಿಬಾಬ ಬೋರ್ಕರ್ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ "ನೂಪುರ" ಎಂಬ ಪುಸ್ತಕ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟ. ಬಾಲ್ಯಕಾಲದ ನೆನಪುಗಳನ್ನು ಸಂಕಲಿಸಿದ "ಬಳ್ಳಂಬೆಟ್ಟಿನ ಬಾಲ್ಯಕಾಲ’ಎಂಬ ಪುಸ್ತಕ ಇನ್ನೊಂದು ಪ್ರಕ್ರಟಿತ ಪುಸ್ತಕ. ವಿಶ್ವ ಕೊಂಕಣಿ ಸಮ್ಮೇಳನವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಸಮ್ಮೇಳನಗಳ ಸಭಾನಿರ್ವಹಣೆ, ಹಲವಾರು ಕವಿಗೋಷ್ಠಿ, ವಿಚಾರಸಂಕಿರಣಗಳಲ್ಲಿ ಭಾಗವಹಿಸುವಿಕೆ. "ಅಂಕುರ’ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನಾಟಕ ತರಬೇತಿ. "ಸ್ವಪ್ನ ಸಾರಸ್ವತ" ನಾಟಕವೂ ಸೇರಿದಂತೆ ಹಲವಾರು ನಾಟಕಗಳ ಕೊಂಕಣಿ ಅನುವಾದ.  ಕನಕದಾಸರ ಹಲವಾರು ಕೀರ್ತನೆಗಳ ಕೊಂಕಣಿ ಅನುವಾದ ಮಾದಿರುತ್ತಾರೆ.  ಬಾನುಲಿ ಪಯಣದ ಮೂರುವರೆ ದಶಕಗಳು, ನೆನಪಿನ ಮಾಲೆ ಅಂಕಣ ಬರಹ ಕಿಟಾಳ್ ಅಂತರ್ಜಾಲ ಸಮೂಹದ ಆರ್ಸೊ ಪಾಕ್ಷಿಕ ಪತ್ರಿಕೆಯಲ್ಲಿ ಮಾರ್ಚ್ 15 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯ ಕನ್ನಡ ಓದುಗರಿಗೆ ಮತ್ತು ಶ್ರೀಮತಿ ಶಕುಂತಲಾ ಆರ್. ಕಿಣಿ ಯವರ ಅಭಿಮಾನಿಗಳು, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲೆಂದು ಅಂಕಣದ ಕಂತುಗಳನ್ನು ಇಲ್ಲಿ ಪ್ರಕಟಿಸುತಿದ್ದೇವೆ. ಓದಿ, ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಈ ಬರಹ ಅಥವಾ ಬರಹದ ಭಾಗವನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳುವ ಮೊದಲು ಲೇಖಕಿ / ಪ್ರಕಾಶಕರ ಅನುಮತಿ ಪಡೆಯಲು ಮರೆಯದಿರಿ.

Recent Archives

ನೆನಪಾಗಿ ಕಾಡುವ ನಾಟಕದ ಪಾತ್ರಗಳು

ಶಕುಂತಲಾ ಆರ್ ಕಿಣಿ        2017-04-03 22:11:24
  |     |   

ನಾನು ಆಕಾಶವಾಣಿಗೆ ಸೇರಿದ ಹೊಸತರಲ್ಲಿ ಹಲವಾರು ನಾಟಕಗಳಲ್ಲಿ ಭಾಗವಹಿಸಿದ್ದೆನಾದರೂ ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಬಿ ಹೈ ಗ್ರೇಡ್ ಅಂಗೀಕೃತ ನಾಟಕ ಕಲಾವಿದೆಯಾಗಿಯೂ ತುಳು ಭಾಷೆಯಲ್ಲಿ ಬಿ ಗ್ರೇಡ್ ಕಲಾವಿದೆಯಾಗಿಯೂ ಅಧಿಕೃತ ಮೊಹರು ದೊರಕಿದ ಬಳಿಕ ಕೆಲವು ಉತ್ತಮ ನಾಟಕಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು.

 

ನಾನು ಭಾಗವಹಿಸಿದ ನೂರಾರು ನಾಟಕಗಳಲ್ಲಿ ಕೆಲವು ಮಾತ್ರ ಅವುಗಳ ವಿಶಿಷ್ಟತೆಯಿಂದಾಗಿ ನೆನಪಲ್ಲಿ ಉಳಿದಿವೆ.ಅವುಗಳಲ್ಲಿ ಮೊದಲನೆಯದು ರಕ್ತಾಕ್ಷಿ ನಾಟಕ. ಕುವೆಂಪು ಅವರು ಸಾವಿರದೊಂಬೈನೂರ ಮೂವತ್ತರ ದಶಕದಲ್ಲಿ ಬರೆದ ಕಾವ್ಯಾತ್ಮಕ ಸಂಸ್ಕೃತ ಭೂಯಿಷ್ಠ ಶೈಲಿಯ, ಹಳೆಗನ್ನಡ ನಡುಗನ್ನಡಗಳ ನಡುವಣ ಅತ್ತ ಗದ್ಯವೂ ಅಲ್ಲದ ಇತ್ತ ಪದ್ಯವೂ ಅಲ್ಲದ ಈ ವಿಶಿಷ್ಟ ಕೃತಿಯನ್ನು ನಾಟಕವಾಗಿ ರಂಗದ ಮೇಲೆ ತರುವ ಪ್ರಯತ್ನ ಮಾಡಿದವರು ಪ್ರಸಿದ್ಧ ನಾಟಕಕಾರ ಪ್ರಸನ್ನ ಅವರು. ಭದ್ರಾವತಿಯಿಂದ ಮಂಗಳೂರಿಗೆ ಸುಮಾರು ೧೯೮೭ರ ಆಸುಪಾಸಿನಲ್ಲಿ ವರ್ಗವಾಗಿ ಬಂದ ಶ್ರೀ ಡಿ.ಎಸ್.ನಾಗಭೂಷಣ ಅವರು ಕನ್ನಡ ವಿಭಾಗದ ಜೊತೆಗೆ ನಾಟಕ, ರೂಪಕಗಳ ಹೊಣೆಯನ್ನು ಹೊತ್ತಿದ್ದರು. ಆ ಕಾಲದಲ್ಲಿ ಅವರು ಶ್ರೀ ಪ್ರಸನ್ನ ಅವರನ್ನು ಮಂಗಳೂರಿಗೆ ಬರಮಾಡಿಕೊಂಡು ರಕ್ತಾಕ್ಷಿಯನ್ನು ರಂಗವೇರಿಸಿದ್ದರು. ಮೂವತ್ತಕ್ಕೂ ಮಿಕ್ಕಿದ ಕಲಾವಿದರು ಭಾಗವಹಿಸಿದ್ದ ಈ ನಾಟಕದಲ್ಲಿ ನಾನೂ ಗುಂಪಿನಲ್ಲಿ ಗೋವಿಂದ ಎಂಬಂತೆ ಭಾಗವಹಿಸಿದ್ದೆ. ಪ್ರಸನ್ನ ಅವರಂಥ ಕಡುಶಿಸ್ತಿನ ನಾಟಕ ನಿರ್ದೇಶಕರ ಕೈಕೆಳಗೆ ಒಂದುವಾರಕ್ಕೂ ಮಿಕ್ಕಿದ ಕಠಿಣ ತಾಲೀಮಿಗೆ ಒಳಪಟ್ಟು ಮಂಗಳೂರಿನ ಭೂಮಿಕಾ, ಅಭಿವ್ಯಕ್ತ, ಕಾಸರಗೋಡಿನ ಯವನಿಕಾ ಮುಂತಾದ ತಂಡದ ನಾಟಕ ಕಲಾವಿದರೊಡನೆ ಸೇರಿ ನಟಿಸಿದ ಈ ನಾಟಕ ಶಾಲಾದಿನಗಳ ಬಳಿಕ ನಾನು ರಂಗದ ಮೇಲೆ ನಟಿಸಿದ ಅತ್ಯಂತ ಗಂಭೀರ ಹಾಗೂ ತಾಂತ್ರಿಕವಾಗಿ ಬಹು ಕ್ಲಿಷ್ಟ ನಾಟಕ. ಆಕಾಶವಾಣಿಯ ಮೈಕ್ರೋಫೋನಿಗಾಗಿ ಮಾತನಾಡುವುದಷ್ಟೇ ಕಲಿತಿದ್ದ ನಾನು ವೇದಿಕೆಯ ಮೇಲೆ ಗಟ್ಟಿಯಾಗಿ ಸಂಭಾಷಣೆಯನ್ನು ಹೇಳುವ ಕಲೆಯನ್ನು ಕಲಿತೆ. ಮೇಳದವರಿಗಾಗಿ ಹೊಲಿಸಿದ ಕೆನೆಬಣ್ಣದ ಖದ್ದರಿನ ಜುಬ್ಬಾ ಮತ್ತು ಪಾಯಿಜಾಮಾದಂತಹ ದಿರಿಸಿನಲ್ಲಿ ನನ್ನ ಅಳತೆಯ ಬಟ್ಟೆಯನ್ನು ಹುಡುಕಿ ತೆಗೆಯುವುದೇ ಕಷ್ಟವಾಗಿತ್ತು. ಅಲ್ಲದೆ ಸೀರೆ ಬಿಟ್ಟು ಬೇರೆ ಉಡುಗೆ ತೊಟ್ಟು ಅಭ್ಯಾಸವೇ ಇಲ್ಲದ ನನಗೆ ಈ ಹೊಸ ವೇಷದಲ್ಲಿ ಆಗುತ್ತಿದ್ದ ಮುಜುಗರವನ್ನು ಪ್ರಸನ್ನರ ಕಿಡಿಗಣ್ಣುಗಳಿಗೆ ಹೆದರಿ ತೋರ್ಪಡಿಸಲೂ ಅಂಜಿ, ಕೊಟ್ಟ ಪಾತ್ರವನ್ನು ನಾನು ಮೈ ಮೇಲೆ ಆವಾಹನೆ ಮಾಡಿಕೊಂಡ ಬಗೆಯನ್ನು ನೆನೆದರೆ ಈಗ ನಗುವೇ ಬರುತ್ತದೆ. ಪುರಭವನದಲ್ಲಿ ಕಿಕ್ಕಿರಿದ ಜನಸಂದಣಿಯ ಮುಂದೆ ಆ ನಾಟಕದ ಸಾಲುಗಳನ್ನು ನಿರ್ಭಿಡೆಯಿಂದ ಹೇಳುವಾಗಲೂ ನನ್ನ ಕಾಳಜಿಯಿದ್ದುದು ಪ್ರಸನ್ನರ ಮುಖಭಾವದ ಬಗ್ಗೆಯೇ.

 

ಮುಂದೆ ಡಿ.ಎಸ್.ನಾಗಭೂಷಣರ ನಿರ್ಮಾಣದ ಹಲವಾರು ನಾಟಕಗಳಲ್ಲಿ ಭಾಗವಹಿಸುತ್ತಾ ನಾನು ಪಾತ್ರಗಳು ಬೇಡುವ ನೈಜತೆಯನ್ನು ಲಜ್ಜೆಯ ಪರಿಧಿ ಮೀರಿ ಸಾಧಿಸಲು ಸಾಧ್ಯವಾಯಿತು. ಅಂದರೆ ಹೊಟ್ಟೆಬಾಕಿ, ಜಗಳಗಂಟಿ, ವಿದೂಷಕಿ, ಘಟವಾಣಿ ಮುಂತಾದ ಮನಸ್ಸಿಗೆ ಒಗ್ಗದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಲು ನಾಗಭೂಷಣರ ನಿರ್ಮಾಣದ ಪಾತ್ರಗಳು ಸಹಾಯಕಾರಿಯಾದುವು. ಹಲವಾರು ಅಣಕು ಧ್ವನಿಯ ಪಾತ್ರಗಳನ್ನೂ ನಿಭಾಯಿಸುವ ಅನುಭವವೂ ದಕ್ಕಿತು. ಜೊತೆಗೆ ಆಗ ಆಗಾಗ ಏರ್ಪಡುತ್ತಿದ್ದ ನಾಟಕಗಳ ಧ್ವನಿಪರೀಕ್ಷೆಯ ಸಂದರ್ಭದಲ್ಲಿ ಗಂಡು ಪರೀಕ್ಷಾರ್ಥಿಗಳಿಗೆ ಸಪೋರ್ಟಿಂಗ್ ಹೆಣ್ಣು ಧ್ವನಿ ಒದಗಿಸುವ ಕೆಲಸ ಮಾಡುತ್ತಾ ಮಾಡುತ್ತಾ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಈ ಎಲ್ಲ ನಾಟಕಗಳಿಗೆ ಹೊಂದುವಂತೆ ಮಾತನಾಡುವ ಶೈಲಿಯೂ ಕರಗತವಾಯಿತು. ಈ ಸಮಯದಲ್ಲಿ ಹಲವಾರು ಉನ್ನತ ಮಟ್ಟದ ಕಲಾವಿದರಿಗೆ ನಾನು ಸಪೋರ್ಟಿಂಗ್ ಧ್ವನಿ ನೀಡಿದ ನೆನಪು. ಪ್ರೊ.ರಾಮದಾಸ್, ಕಾಸರಗೋಡು ಚಿನ್ನಾ, ಪ್ರೊ.ಬಾಲಕೃಷ್ಣ ಶೆಟ್ಟಿ ಕಟೀಲು, ಕಲ್ಬಾವಿ ರಾಜೇಂದ್ರ, ಸುರೇಂದ್ರ ಶೇಟ್, ದಿನಕರ ಶೇಟ್, ಆರ್.ನರಸಿಂಹ ಮೂರ್ತಿ, ನಟರಾಜ ದೀಕ್ಷಿತ್, ಸಿ.ಕೇಶವನಾಥ್, ಬಳ್ಕೂರ್ ಸಹೋದರರು, ಲಕ್ಷ್ಮಣಕುಮಾರ್ ಮಲ್ಲೂರ್, ಜಯಪ್ರಕಾಶ್ ಮಾವಿನಕುಳಿ, ಯು.ನಾರಾಯಣ ಶರ್ಮ, ನಾ.ದಾಮೋದರ ಶೆಟ್ಟಿ, ಡುಂಡಿರಾಜ್ - ಹೀಗೆ ಹಲವಾರು ಕಲಾವಿದರ ಜೊತೆ ಸಹ ಕಲಾವಿದೆಯಾಗಿ, ಧ್ವನಿ ಪರೀಕ್ಷಕರಾಗಿ ಬಂದ ಡಾ.ವಸಂತ ಕವಲಿ, ಶ್ರೀಮತಿ ಯಮುನಾ ಮೂರ್ತಿ, ಪರ್ವತವಾಣಿ, ವಾಮನ ರಾವ್, ಎಸ್.ಎಸ್.ಉಮೇಶ್ ಮುಂತಾದವರ ಮೆಚ್ಚುಗೆಗೂ ಪಾತ್ರಳಾಗಿದ್ದೆ.


ಹಲವಾರು ರಾಷ್ಟ್ರೀಯ ನಾಟಕಗಳಲ್ಲಿ ಭಾಗವಹಿಸಿದ ತೃಪ್ತಿಯೂ ನನ್ನ ಪಾಲಿಗಿದೆ. "ವಿಷಕನ್ಯೆ" ಎಂಬ ಎಚ್.ಕೆ ರಂಗನಾಥರ ಪ್ರಸಿದ್ಧ ನಾಟಕದಲ್ಲಿ ನಾಯಕಿ ಸುಮನಾಳ ಗೆಳತಿಯ ಪಾತ್ರದಲ್ಲಿ ಆಕೆ ಅನುಭವಿಸುವ ಮಾನಸಿಕ ತೊಳಲಾಟ, ಇಬ್ಬಂದಿತನವನ್ನು ಅಭಿವ್ಯಕ್ತಿಸುತ್ತಾ ಶ್ರೀಕಲಾ ಉಡುಪರ ಜೊತೆ, ಡಾ.ಸಿ.ಎನ್.ರಾಮಚಂದ್ರನ್ ಅವರು ಬರೆದ "ಗದಾಯುದ್ಧ" ನಾಟಕದಲ್ಲಿ ಯುದ್ಧಾನಂತರ ರಣ ಭೂಮಿಯಲ್ಲಿ ತನ್ನವರ ದೇಹವನ್ನರಸುತ್ತಾ ಸಾಗುವ ದು:ಖ ವಿಹ್ವಲ ಹೆಣ್ಣೊಬ್ಬಳ ಪಾತ್ರದಲ್ಲಿ ವೀಣಾ ಬನ್ನಂಜೆಯವರ ಜೊತೆ, ಸಾರಾ ಅಬೂಬಕರ್ ಅವರ "ಗೆದ್ದವರಾರು’ ನಾಟಕದಲ್ಲಿ ಗಡಿರೇಖೆಯ ಕದನದಲ್ಲಿ ಮೃತಪಟ್ಟ ಸೈನಿಕನ ತಾಯಾಗಿ, ಶತ್ರುಸೈನ್ಯದ ಗಾಯಾಳು ಸೈನಿಕನನ್ನು ತನ್ನ ಕರುಳ ಉರಿಯನ್ನು ಮುಚ್ಚಿಟ್ಟು ಉಪಚರಿಸುತ್ತಾ ನೋವನ್ನು ನುಂಗಿ ಸೊಸೆಯನ್ನು ಸಂತೈಸುವ ಪಾತ್ರದಲ್ಲಿ ಸರೋಜಿನಿ ಶೆಟ್ಟಿ ಹಾಗೂ ರಾಜಗೋಪಾಲ್ ಶೇಟ್ ಅವರ ಜೊತೆ, ಇಂದುಮತಿ ರಾಮಮೂರ್ತಿಯವರ "ವಿಷವರ್ತುಲ" ನಾಟಕದಲ್ಲಿ ರೇಗಿಂಗ್ ಗೆ ಬಲಿಯಾದ ಮಗನ ತಾಯಾಗಿ ಭೋರ್ಗರೆವ ದು:ಖತಪ್ತೆಯಾಗಿ, ಬಳಿಕ ದು:ಖಶಮನೆಯಾಗಿ ತನ್ನ ಮಗನನ್ನು ಬಲಿ ಪಡೆದ ವಿದ್ಯಾರ್ಥಿ ಸಮೂಹವನ್ನು ಉದ್ದೇಶಿಸಿ ವಿದ್ಯಾರ್ಥಿಸಂಘದ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿ ನಿರ್ವಹಿಸಿದ ಪಾತ್ರಗಳು ಈಗಲೂ ಮೈ ಜುಂ ಎನಿಸುವಂಥವು. ಅಳುವ ಪಾತ್ರಗಳನ್ನು ಸೊಗಸಾಗಿ ನಿರ್ವಹಿಸಬಲ್ಲ ಖ್ಯಾತ ನಟಿ ಸರೋಜಿನಿ ಶೆಟ್ಟಿಯವರೇ ನನ್ನ ಅಳಬಲ್ಲ ಸಾಮರ್ಥ್ಯವನ್ನು ಮೆಚ್ಚಿದ್ದರು. ನನ್ನ ಅಭಿನಯ ಸಾಮರ್ಥ್ಯವನ್ನು ಒರೆಗೆ ಹಚ್ಚಿದ ನಿರ್ದೇಶಕರಾದ ಶ್ರೀ ಬಸವರಾಜ್, ಶ್ರೀಅಬ್ದುಲ್ ರೆಹಮಾನ್ ಪಾಶಾ, ಶ್ರೀ ಚೇತನ್ ಕುಮಾರ್ ನಾಯ್ಕ್, ಶ್ರೀಡಿ.ಎಸ್.ನಾಗಭೂಷಣ, ಶ್ರೀಸಿ.ಯು.ಬೆಳ್ಳಕ್ಕಿ, ಶ್ರೀಶಂಕರ್ ಎಸ್.ಭಟ್, ಎಸ್.ಎಸ್.ಹಿರೇಮಠ್, ರಮಾ .ಎಸ್.ಹಿರೇಮಠ್, ಮುದ್ದು ಮೂಡುಬೆಳ್ಳೆ ,ಕನ್ಸೆಪ್ಟಾ ಫೆರ್ನಾಂಡಿಸ್, ಡಾ.ಶರಭೇಂದ್ರ ಸ್ವಾಮಿ ಹಾಗೂ ಶ್ರೀ ರಾಜಶೇಖರನ್ ನಾಯರ್ ಇವರನ್ನು ಮರೆಯುವಂತೆಯೇ ಇಲ್ಲ. ಸಹಾಯಕ ನಿಲಯ ನಿರ್ದೇಶಕರಾಗಿ ಮಂಗಳೂರಿನಲ್ಲಿದ್ದಾಗ ಹಲವಾರು ಉತ್ತಮ ನಾಟಕಗಳನ್ನು ನಿರ್ಮಿಸಿದ ಶ್ರೀ ಜಿ.ಎಂ.ಶಿರಹಟ್ಟಿಯವರ ಅದ್ಭುತ ನಿರ್ಮಾಣ ಚಾತುರ್ಯವನ್ನು ಕಂಡಿದ್ದೆನಾದರೂ ಅವರ ನಿರ್ಮಾಣದ ನಾಟಕಗಳಲ್ಲಿ ಭಾಗವಹಿಸಿರಲಿಲ್ಲ. ಕೆ.ಟಿ.ಕೃಷ್ಣಕಾಂತ್ ಅವರ ಅಪೂರ್ವ ನಾಟಕ "ನರಕದ ನಾಯಿ’ಯ ನಿರ್ಮಾಣದ ಸಮಯದಲ್ಲಿ ನಾನಿನ್ನೂ ಹೊಸಬಳಾಗಿದ್ದು ಕಣ್ಣರಳಿಸಿ, ಕಿವಿ ನಿಮಿರಿಸಿ ಕೇಳಿದ ನಾಟಕವದು.

 

ಸುಮಾರು ೨೦೦೬ರಲ್ಲಿ ಕೇರಳದ ಕಣ್ಣಾನೂರಿನಿಂದ ಮಂಗಳೂರಿಗೆ ನಿರ್ದೇಶಕರಾಗಿ ನಿಯುಕ್ತರಾದ ಶ್ರೀ ಸಿ. ಪಿ. ರಾಜಶೇಖರನ್ ನಾಯರ್ ಅವರು ನಾಟಕರಂಗದಲ್ಲಿ ಪಳಗಿದವರು. ಅವರು ತಮ್ಮ ನಿರ್ಮಾಣದ ನಾಟಕಗಳಿಗಾಗಿ ಅಖಿಲ ಭಾರತ ಮಟ್ಟದ ನಾಟಕಸ್ಪರ್ಧೆಗಳಲ್ಲಿ ಬಹುಮಾನ ಪಡೆದವರು. ಅವರು ಮಂಗಳೂರಿನಲ್ಲಿದ್ದ ಕಾಲಾವಧಿಯಲ್ಲಿ ಹಲವಾರು ನೂತನ ಕಾರ್ಯಕ್ರಮಗಳನ್ನು ಆರಂಭಿಸಿದ್ದರು. ಇಲ್ಲಿನ ಯಕ್ಷಗಾನವನ್ನು ಬಳಸಿ "ಒಡ್ಡೋಲಗ’ವೆಂಬ ನಾಟಕವನ್ನು ಮಲೆಯಾಳಂನಲ್ಲಿ ಬರೆದಿದ್ದರು. ಅದನ್ನು ಕನ್ನಡಕ್ಕೆ ಅನುವಾದಿಸಿದವರು ಡಾ.ಕೆ. ಎಮ್. ರಾಘವ ನಂಬಿಯಾರರು. ಆ ನಾಟಕದಲ್ಲಿ ಅಲ್ಲಲ್ಲಿ ನಡುವೆ ಯಕ್ಷಗಾನ ಪ್ರಸಂಗದ ತುಣುಕುಗಳಿದ್ದು, ನಾನು ದುಶ್ಯಾಸನನಿಂದ ಸೀರೆ ಸೆಳೆಯಲ್ಪಡುವಾಗ ಮಾನ ರಕ್ಷಣೆಗಾಗಿ ಕೃಷ್ಣನಿಗೆ ಮೊರೆಯಿಡುವ ದ್ರೌಪದಿಯ ಪಾತ್ರವನ್ನು ನಿರ್ವಹಿಸಿದ್ದೆ. ಆ ನಾಟಕ ಪ್ರಸಾರವಾದ ಕೂಡಲೇ ರಾತ್ರಿಯೇ ರಾಜಶೇಖರನ್ ಅವರು ನನಗೆ ಕರೆ ಮಾಡಿ ಮೆಚ್ಚುಗೆಯನ್ನು ಸೂಸಿದ್ದು ಮಾತ್ರವಲ್ಲ, ಆ ನಾಟಕದ ಮರು ನಿರ್ಮಾಣದ ಸಮಯದಲ್ಲಿ ದ್ರೌಪದಿಗೆ ಸಂವಾದಿಯಾದ ಮುಖ್ಯ ಪಾತ್ರವನ್ನೇ ನಿರ್ವಹಿಸುವಂತೆ ಕೋರಿದ್ದರು ಕೂಡಾ.

 

ಮಹಿಳಾ ಪಾತ್ರಧಾರಿಗಳೇ ಇದ್ದ "ಬಿರ್ಜಿಸಳ ಅಂತ:ಪುರ"ವೆಂಬ ರಾಷ್ಟ್ರೀಯ ನಾಟಕದಲ್ಲಿ ಮುಖ್ಯ ಪಾತ್ರಧಾರಿ ಡಾ.ಮಾಧವೀ ಭಂಡಾರಿಯವರ ಆಪ್ತಸಖಿಯಾಗಿ ನಾನು ನಿರ್ವಹಿಸಿದ ಪಾತ್ರ ಅಂತಪುರದೊಳಗಿನ ಸ್ತ್ರೀಲೋಕದ ದು:ಖದುಮ್ಮಾನಗಳಿಗೆ ಕನ್ನಡಿ ಹಿಡಿಯುವಂತಿದ್ದು ತುಂಬಾ ಚಾಲೆಂಜಿಂಗ್ ಆಗಿತ್ತು. ಅಲ್ಲದೆ ಅದುವರೆಗೆ ನಾಟಕ, ರೂಪಕ, ಹಾಡು ಹೀಗೆ ನಮ್ಮ ಯಾವುದೇ ಎಕ್ಸ್ಟ್ರಾ ಕೆಲಸಗಳಿಗೆ ಸಂಭಾವನೆ ಪಡೆಯುವ ಅವಕಾಶವಿರುತ್ತಿರಲಿಲ್ಲವಾಗಿ ಈ ನಾಟಕಕ್ಕಾಗಿ ಪ್ರಥಮ ಬಾರಿ ನಾನು ಸಂಭಾವನೆ ಪಡೆದೆ ಅನ್ನುವುದೂ ನೆನಪಿನಲ್ಲಿ ಇಡುವಂಥದ್ದು. ಈ ನಾಟಕದ ನಿರ್ದೇಶನ ಮತ್ತು ನಿರ್ಮಾಣ ಡಾ.ಶರಭೇಂದ್ರ ಸ್ವಾಮಿಯವರದು. ನನ್ನ ನಿವೃತ್ತಿಯ ಅನಂತರವೂ ನಾನು ಅಭಿನಯಿಸಿದ ನಾಟಕ "ಊರ ಕೊನೆಯ ಮನೆ’. ಮೂಲಕಥೆ - ಕುಂ.ವೀರಭದ್ರಪ್ಪ. ನಾಟಕ ರೂಪಾಂತರ ಹಾಗೂ ನಿರ್ದೇಶನ ಡಾ.ಸ್ವಾಮಿ ಅವರದು. ಈ ನಾಟಕ ಕರ್ನಾಟಕದ ಎಲ್ಲ ಬಾನುಲಿ ಕೇಂದ್ರಗಳಿಂದ ಏಕ ಕಾಲದಲ್ಲಿ ಪ್ರಸಾರವಾಗಿತ್ತು. ಇದರಲ್ಲಿ ನಾನು ನಿರ್ವಹಿಸಿದ ತಲೆಹಿಡುಕಿ ಮುದುಕಿಯೊಬ್ಬಳ ಪಾತ್ರ ತುಂಬಾ ಚಾಲೆಂಜಿಂಗ್ ಅನ್ನುವಂಥದ್ದು.

 

ಆಕಾಶವಾಣಿಯ ನಾಟಕಗಳ ಬಗ್ಗೆ ನನ್ನ ನೆನಪನ್ನು ದಾಖಲಿಸುವಾಗ "ಕವಿಪ್ರಿಯ" ನಾಟಕದ ಕುರಿತು ಹೇಳದಿದ್ದರೆ ಅಪೂರ್ಣವಾಗುತ್ತದೆ. ಈ ಹಿಂದೆ ಇದರ ಬಗ್ಗೆ ಪ್ರಾಸ್ತಾವಿಕವಾಗಿ ಹೇಳಿದ್ದೆ ಕೂಡಾ. ಮೂಲ ಹಿಂದಿ - ಶ್ಯಾಮಸುಂದರ ದುಬೆ, ಕನ್ನಡ ಅನುವಾದ - ಮಾಲತಿ.ಆರ್.ಭಟ್. ಈ ರಾಷ್ಟ್ರ‍ೀಯ ನಾಟಕದ ಮೂಲ ಹಸ್ತಪ್ರತಿ ಮಂಗಳೂರು ಕೇಂದ್ರಕ್ಕೆ ಬಂದು ತಲುಪಿದ್ದೇ ತಡವಾಗಿಯಾದ ಕಾರಣ ಈ ನಾಟಕದಲ್ಲಿದ್ದ ಒಂಬತ್ತು ಹಾಡುಗಳನ್ನು ನಾನು ಹಿಂದಿಯಿಂದ ಕನ್ನಡಕ್ಕೆ ಒಂದೇ ರಾತ್ರಿಯಲ್ಲಿ ಅನುವಾದಿಸಿದ್ದು. ಅದನ್ನು ಮರುದಿನ ಧ್ವನಿ ಮುದ್ರಿಸುವ ಸಮಯದಲ್ಲಿ ಕೋರಸ್ ನವರ ಜೊತೆ ನಾನೂ ಧ್ವನಿ ಸೇರಿಸಿ ಹಾಡಿದ್ದು - ಈ ಎಲ್ಲವನ್ನೂ ಉಲ್ಲೇಖಿಸಲೇ ಬೇಕಾಗುತ್ತದೆ.

 

ಲಜ್ಜೆಯ ಪರಿಧಿ ಮೀರಿ ನಟಿಸಿದ ಪಾತ್ರಗಳಲ್ಲಿ ’ಅಜ್ಜೀಕಥೆ’ಯ ಕಳ್ಳಿ ಪಾತ್ರವೂ ಒಂದು. ಡಾ.ಶರಭೇಂದ್ರ ಸ್ವಾಮಿ ಹಾಗೂ ಸೂರ್ಯನಾರಾಯಣ ಭಟ್ ಇವರ ಜಂಟಿ ನಿರ್ಮಾಣದ ಈ ನಾಟಕದಲ್ಲಿದ್ದ ಹಾಡುಗಳಿಗೆ ಸಂಗೀತ ಸಂಯೋಜನೆ ಶಂಕರ್.ಎಸ್.ಭಟ್ ಅವರದ್ದು. ಹಾಡುವವರ ಗುಂಪಿನಲ್ಲಿ ನಾನೂ ಇದ್ದೆ. ಬಹುಶ: ಎಸ್.ಎಸ್.ಹಿರೇಮಠ್ ಅವರ ನಿರ್ದೇಶನದಲ್ಲಿ ಐವತ್ತಕ್ಕೂ ಮಿಕ್ಕಿದ ಪಾತ್ರಗಳಿದ್ದ ’ಆನಂದ ಮಠ" ರಾಷ್ಟ್ರ‍ೀಯ ನಾಟಕದಲ್ಲಿ ನಾವು ಒಬ್ಬೊಬ್ಬರೂ ಎರಡು - ಮೂರು ಪಾತ್ರಗಳನ್ನು ನಿರ್ವಹಿಸಿದುದು, "ಕಥೆ ಇನ್ನೂ ಇದೆ’ ನಾಟಕ ಧಾರಾವಾಹಿಯಲ್ಲಿ ಕಂತು ಕಂತಾಗಿ ಭಾಗವಹಿಸಿದ ರೋಚಕ ಅನುಭವ, ನಾನು ಬರೆದು, ಮಾಲತಿ .ಆರ್.ಭಟ್ ನಿರ್ಮಿಸಿದ ’ಅಚಲಾ" ನಾಟಕ, ಯಾವ ನಾಟಕ, ಯಾವ ಪಾತ್ರ,ಯಾವಾಗ ಪ್ರಸಾರವೆಂಬುದೂ ಗೊತ್ತಿಲ್ಲದೆ ಕರೆದಾಗ ಪ್ರಸಾರ ಕೊಠಡಿಯಿಂದ ಓಡಿ ಬಂದು ಓದಿಹೋದ ಅನಾಮಿಕ ನಾಟಕದ ಸಾಲುಗಳು, ಮಗಳಾಗಿ, ಸಹೋದರಿಯಾಗಿ, ಪ್ರೇಮಿಯಾಗಿ, ಅಮ್ಮನಾಗಿ, ಅಜ್ಜಿಯಾಗಿ, ರಾಣಿಯಾಗಿ, ಸೇವಕಿಯಾಗಿ, ತಲೆಹಿಡುಕಿಯಾಗಿ, ಕಳ್ಳಿ, ಸುಳ್ಳಿಯಾಗಿ - ನಾನಾ ವೇಷಗಳನ್ನು ಮಾತಲ್ಲೇ ತೊಟ್ಟು, ಅತ್ತು, ಕರೆದು, ನಕ್ಕು ನಲಿಸಿದ ನೂರಾರು ಪಾತ್ರಗಳು ಈಗಲೂ ಆಕಾಶವಾಣಿಯ ಧ್ವನಿಮುದ್ರಣ ಭಂಢಾರದ ಧ್ವನಿ ಸುರುಳಿ,ಧ್ವನಿ ತಟ್ಟೆಗಳಲ್ಲಿ ತಣ್ಣಗೆ ಕುಳಿತಿವೆ.

 

ಒಟ್ಟಿನಲ್ಲಿ ಮಂಗಳೂರು ಆಕಾಶವಾಣಿ ನಾಟಕಕ್ಷೇತ್ರದಲ್ಲಿ ಸಮೃದ್ಧ ಅವಕಾಶಗಳನ್ನು ನನಗೆ ನೀಡಿ ನನ್ನನ್ನು ಬೆಳೆಯಿಸಿತು. ವಿವಿಧ ಪಾತ್ರಗಳನ್ನು ನೀಡಿ ನನ್ನ ಧ್ವನಿ ಸಾಮರ್ಥ್ಯವನ್ನು ಹಿಗ್ಗಿಸಿತು. ಆಕಾಶವಾಣಿಯ ಸ್ಟುಡಿಯೋಗಳಲ್ಲಿ ಬಳೆ ಮತ್ತು ಹಾಳೆಗಳ ಸದ್ದಾಗದಂತೆ, ಕೆಮ್ಮು ಬಾರದಂತೆ, ಕಾಲ ಸಪ್ಪಳವಾಗದಂತೆ ಗಂಟೆಗಟ್ಟಲೆ ಮೈಕಿನ ಮುಂದೆ ನಿಂತು ತಡ ರಾತ್ರಿಯವರೆಗೂ ಹೊತ್ತು ಮೀರುತ್ತಿದ್ದರೂ ಸಹನೆ ಕಳೆದುಕೊಳ್ಳದೆ, ಪಾತ್ರಗಳ ಒಳಗೆ ಪರಕಾಯ ಪ್ರವೇಶ ಮಾಡಿ ನಿರ್ವಹಿಸಿದ ನೂರಾರು ಪಾತ್ರಗಳು ಇಂದಿಗೂ ನನ್ನನ್ನು ಕಾಡುತ್ತವೆ, ಜೊತೆಗೆ ಆ ನಾಟಕಗಳ ಸಹಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಣ ಸಹಾಯಕರ ಜೊತೆ ಕಳೆದ ದಿನಗಳು ನೆನಪಾಗುತ್ತವೆ. ಕೇವಲ ಧ್ವನಿಯ ಮೂಲಕವೇ ಶ್ರೋತೃಗಳ ಚಿತ್ತದಲ್ಲಿ ಪಾತ್ರಗಳನ್ನು, ಸನ್ನಿವೇಶಗಳನ್ನು ಕೆತ್ತಿ ನಿಲ್ಲಿಸಿದ ಸಹಕಾಯಕ ಯೋಗಿಗಳೆಲ್ಲರಿಗೂ ಈ ಮೂಲಕ ನಮನ ಸಲ್ಲಿಸುತ್ತೇನೆ.

ಮುಂದಿನ ಸಂಚಿಕೆಗೆ ►